ಪದ್ಮಣಾಂಕ

	ಸು. 1420. 15ನೆಯ ಶತಮಾನದ ಪ್ರಮುಖ ಕವಿಗಳಲ್ಲೊಬ್ಬ. ವೀರಶೈವ. ಪದ್ಮರಾಜ ಪುರಾಣದ ಕರ್ತೃ. ಕನ್ನಡದ ಬಹುಪಾಲು ಕವಿಗಳಂತೆ ಈತನ ಕಾಲವೂ ಅನಿರ್ದಿಷ್ಟ. ಹಲವಾರು ವಿಮರ್ಶಕರು ಚರ್ಚಿಸಿ ನಿರ್ಣಯಿಸಿದಂತೆ ಇತನ ಕಾಲ ಸು. 1420. ಬಸವಾದಿ ಪ್ರಮಥರ ಸಮಕಾಲೀನರಾದ ಸಕಲೇಶ ಮಾದರಸ, ಹರಿಹರನ ಸಮಕಾಲಿನನಾದ ಕೆರೆಯ ಪದ್ಮರಸ ಇವರ ವಂಶಜ. ಪೂರ್ವಜರೆಲ್ಲರೂ ಪರಮ ಶಿವಭಕ್ತರು ; ಶಿವಾನುಭವಿಗಳು. ಕವಿ ತನ್ನ ವೈಯಕ್ತಿಕ ಜೀವನದ ಬಗೆಗೆ ಏನನ್ನೂ ಹೇಳಿಕೊಂಡಿಲ್ಲ.

	ಕೆರೆಯ ಪದ್ಮರಸನ ಜೀವನಚರಿತ್ರೆಯನ್ನೇ ಆಧಾರವಾಗಿಸಿಕೊಂಡು ಪದ್ಮರಾಜ ಪುರಾಣವನ್ನು ರಚಿಸಲಾಗಿದೆ. ಐತಿಹಾಸಿಕ ಹಾಗೂ ಚಾರಿತ್ರಿಕ ಅಂಶಗಳನ್ನೊಳಗೊಂಡ ಈ ಕೃತಿ ಹರಿಹರ, ರಾಘವಾಂಕ, ಕೆರೆಯ ಪದ್ಮರಸರ ಬಗೆಗೆ ಹೆಚ್ಚಿನ ವಿವರಗಳನ್ನೊದಗಿಸುತ್ತದೆ.

	ವಾರ್ಧಕ ಷಟ್ಪದಿಯಲ್ಲಿರುವ ಈ ಗ್ರಂಥದಲ್ಲಿ 13 ಸಂಧಿಗಳು, 1,270 ಪದ್ಯಗಳು ಇವೆ.

	ಈ ಗ್ರಂಥದಲ್ಲಿ ಕೆರೆಯ ಪದ್ಮರಸ ಲೋಕಾಯತ, ಜೈನ, ಬೌದ್ಧ, ಮೀಮಾಂಸಕ, ಭಾಟ್ಟ, ಶಾಕ್ತ ಮತಗಳನ್ನು ವಾದದಲ್ಲಿ ಖಂಡಿಸಿದಂತೆ ಹೇಳುವ ಭಾಗಗಳಲ್ಲಿ ಕವಿ ಶ್ರುತಿಸ್ಮøತಿಗಳ ವಾಕ್ಯಗಳನ್ನು ಪದ್ಯಗಳಲ್ಲಿ ಹೊಂದಿಕೆಯಾಗಿ ಸೇರಿಸಿ ಬರೆದಿದ್ದಾನೆ.

	ಮೂಲ ಕಥೆಗೆ ಪೋಷಕವಾಗಿ ಬಂದಿರುವ ಹಲವಾರು ಉಪಕಥೆಗಳ ನಡಿಗೆಯನ್ನು ಗಮನಿಸಿದಾಗ ಕಥನ ಕಲೆ ಕವಿಗೆ ಕರಗತವಾಗಿರುವುದು ಸ್ಪಷ್ಟವಾಗುತ್ತದೆ. ಹರಪಾರಮ್ಯವನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಕವಿಯ ಪಾಂಡಿತ್ಯ, ಬಹುಶ್ರುತ ವಿಜ್ಞಾನ ವೇದಾಗಮೋಪನಿಷತ್ತುಗಳಲ್ಲಿನ ಅಭ್ಯಾಸ ಪರಿಣತಿಗಳು ಪ್ರಕಟವಾಗಿವೆ. ಗ್ರಂಥ ಪ್ರೌಢವಾಗಿದ್ದು ಲಕ್ಷಣಬದ್ಧವಾಗಿದೆ. ಧರ್ಮತತ್ತ್ವಗಳ ವಿವೇಚನೆಯಿಂದ ಪರಿಪುಷ್ಟಗೊಂಡ ಈ ಕೃತಿ ವೀರಶೈವ ಪುರಾಣಗಳಲ್ಲಿ ಪ್ರಮುಖವೆನಿಸಿದೆ.			(ಎಂ.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ